ದಿನಾಂಕ 26-05-2024 ರಂದು ಅಭ್ಯುದಯ ಜ್ಞಾನಗಿರಿಯಲ್ಲಿ ಕಲಿಕಾ ಕೇಂದ್ರದ ಸ್ವಯಂಸೇವಕರ (ಕಲಿಕಾ ಕೇಂದ್ರದ ಶಿಕ್ಷಕರ) ವರ್ಗವನ್ನು ಹಮ್ಮಿಕೊಳ್ಳಲಾಗಿತ್ತು. ಈ ವರ್ಗದಲ್ಲಿ ಕಲಿಕಾ ಕೇಂದ್ರದ ಶಿಕ್ಷಕರು, ವಿದ್ಯಾನಿಧಿ ವಿದ್ಯಾರ್ಥಿಗಳು ಹಾಗೂ ಅಭ್ಯುದಯದ ಸ್ವಯಂಸೇವಕರು ಭಾಗವಹಿಸಿದ್ದರು. ಈ ವರ್ಗದ ಮೊದಲ ಅವಧಿಯಲ್ಲಿ ಶ್ರೀ ಪ್ರಕಾಶ ಹೊಳ್ಳರವರು ಎಲ್ಲರಿಗೂ ಹಾಡು, ಭಜನೆ, ಶ್ಲೋಕಗಳನ್ನು ಹೇಳಿಕೊಟ್ಟರು. ನಂತರ ಅಭ್ಯುದಯ ಪ್ರಾರಂಭವಾಗಿ 20 ವರ್ಷಗಳಾದ ಹಿನ್ನೆಲೆಯಲ್ಲಿ ಅಭ್ಯುದಯದ ಶಿಕ್ಷಣ ಪ್ರಕಲ್ಪವನ್ನು ಮುನ್ನಡೆಸುತ್ತಿರುವ ಪ್ರೋ|| ವಿದ್ಯಾಶಂಕರವರು, ಅಭ್ಯುದಯದ ಸ್ವಯಂಸೇವಕರಾದ ಶ್ರೀ ಪ್ರಕಾಶ ಹೊಳ್ಳ, ಶ್ರೀ ನಾಗರಾಜನ್, ಶ್ರೀ ಮಧುಕರ್, ಶ್ರೀ ಬದರಿನಾಥ್, ಶ್ರೀ ಶ್ರೀಧರ್ ಮತ್ತು ಶ್ರೀಮತಿ ಭಾರತಿ ಅವರಿಗೆ ಅಭ್ಯುದಯದ ಸ್ಮರಣಿಕೆಗಳನ್ನು ನೀಡಿದರು.
ಐ.ಟಿ. ಕ್ಷೇತ್ರದ ಕಾರ್ಯಕರ್ತರಾದ ಶ್ರೀ ಕಲ್ಲೇಶರವರಿಂದ ವಿದ್ಯಾರ್ಥಿಗಳಾದ ನೇಹಾ ನಾಯಕ್, ನಿಧಿ ನಾಯಕ್, ಕೀರ್ತನ್, ಸಮಿತಾರವರಿಗೆ ನೆನಪಿನ ಕಾಣಿಕೆಗಳನ್ನು ವಿತರಿಸಿದರು. ಕಲಿಕಾ ಕೇಂದ್ರದ ಶಿಕ್ಷಕರುಗಳಿಗೆ ಅಭ್ಯುದಯದ ಸ್ಮರಣಿಕೆಗಳನ್ನು ವಿತರಿಸಲಾಯಿತು.
ಶ್ರೀಮತಿ ಭಾರತಿರವರು ಕಳೆದ ಶೈಕ್ಷಣಿಕ ವರ್ಷದಲ್ಲಿ ಅಭ್ಯುದಯದ ನಾಲ್ಕು ಕಲಿಕಾ ಕೇಂದ್ರಗಳಿಗೆ ಭೇಟಿ ನೀಡಿ ಕಲಿಕಾ ಕೇಂದ್ರದ ಮಕ್ಕಳಿಗೆ ಗಣಿತ ವಿಷಯದಲ್ಲಿ ಪರೀಕ್ಷೆ ನಡೆಸಿದ್ದರು. ಆ ಪರೀಕ್ಷೆಯ ಮೌಲ್ಯಮಾಪನ ನಡೆಸಿ ನಾಲ್ಕೂ ಕಲಿಕಾ ಕೇಂದ್ರಗಳ ಮಕ್ಕಳು ಯಾವ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿದರು ಹಾಗೂ ಯಾವ ಪ್ರಶ್ನೆಗಳನ್ನು ತಾವು ಅರ್ಥೈಸಿಕೊಳ್ಳುವುದರಲ್ಲಿ ಸಮಸ್ಯೆಗಳನ್ನೆದುರಿಸಿದರು ಎಂಬುವುದರ ಕುರಿತು ಎಲ್ಲಾ ಶಿಕ್ಷಕರೊಡನೆ ಚರ್ಚಿಸಿದರು.
ಅಭ್ಯುದಯದ ವತಿಯಿಂದ ಎಲ್ಲಾ ಕಲಿಕಾ ಕೇಂದ್ರದ ಶಿಕ್ಷಕರಿಗೆ 1 ರಿಂದ 1೦ ನೇ ತರಗತಿಯ ಪಠ್ಯ ಪುಸ್ತಕಗಳನ್ನು ವಿತರಿಸಲಾಯಿತು. ಲಘು ವಿರಾಮದ ನಂತರ ಪ್ರೋ|| ವಿದ್ಯಾಶಂಕರರವರು ವರ್ಗಕ್ಕೆ ಬರುವ ಉದ್ದೇಶ ಮತ್ತು ಕಲಿಕಾ ಕೇಂದ್ರ ನಡೆಸುತ್ತಿರುವುದರ ಉದ್ದೇಶದ ಕುರಿತು ಶಿಕ್ಷಕರೊಡನೆ ಚರ್ಚಿಸಿದರು. ಈ ಸಮಯದಲ್ಲಿ ಕಗ್ಗಲಿಪುರ ಹಿರಿಯ ಶಿಕ್ಷಕರಾದ ಸುಮಂತ, ಆನೇಕಲ್ ನಗರದ ಕುಸುಮ, ಉತ್ತರಿ ಕಲಿಕಾ ಕೇಂದ್ರದ ಶಿಕ್ಷಕರಾದ ವರಲಕ್ಷ್ಮೀಯವರು, ಹೆಚ್. ಎಸ್. ಆರ್. ಲೇಔಟಿನ ಶಿಕ್ಷಕರಾದ ಸುಖೇಶರವರು ಈ ವರ್ಗದ ಕುರಿತು ತಮ್ಮ ಅನಿಸಿಕೆಗಳನ್ನು ಸಭೆಗೆ ಹಂಚಿಕೊಂಡರು.
ಅಭ್ಯುದಯದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಾದ ಶ್ರೀ ಲಕ್ಷ್ಮೀನಾರಾಯಣರವರು ಕಲಿಕಾ ಕೇಂದ್ರದ ಶಿಕ್ಷಕರಿಗೆ, ಕಲಿಕಾ ಕೇಂದ್ರ ನಡೆಸುವುದರ ಪ್ರಾಮುಖ್ಯತೆ ಕುರಿತು ತಿಳಿಸಿಕೊಟ್ಟರು. ಬಿ. ಎನ್. ಆರ್. ವ್ಹೀ. ಎನ್ ಪ್ರಕಲ್ಪದ ಬಗ್ಗೆ ಸೂಚನೆಗಳನ್ನು ನೀಡಲಾಯಿತು. ಕಲಿಕಾ ಕೇಂದ್ರಕ್ಕೆ ಬರುತ್ತಿರುವ ಹಾಗೂ ಸಂಪರ್ಕದಲ್ಲಿರುವ ಎಸ್. ಎಸ್. ಎಲ್. ಸಿ ಹಾಗೂ ಪಿ.ಯು.ಸಿ ವಿದ್ಯಾರ್ಥಿಗಳ ಮಾಹಿತಿಯನ್ನು ಅಭ್ಯುದಯ ಕೇಂದ್ರ ಕಾರ್ಯಾಲಯಕ್ಕೆ ನೀಡಬೇಕೆಂದು ಸೂಚಿಸಲಾಯಿತು. ಸಾಮಾಜಿಕ ಜಾಲತಾಣಗಳಿಂದ ಯಾವ ರೀತಿ ಮೋಸಗಳು ನಡೆಯುತ್ತಿವೆ ಮತ್ತು ಅದರ ಕುರಿತು ಹೇಗೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಲಾಯಿತು. ಶಾಂತಿ ಮಂತ್ರದೊಂದಿಗೆ ಈ ವರ್ಗವು ಮುಕ್ತಾಯವಾಯಿತು.