ಅಭ್ಯುದಯ ಕೇಶವ ಕೃಪಾ ಸಂವರ್ಧನ ಸಮಿತಿಯು ಆರೋಹಣವನ್ನು ಬೆಂಗಳೂರಿನ ಬನಶಂಕರಿಯಲ್ಲಿ ಇರುವ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ದಿನಾಂಕ 31/12/2023 ರಂದು ಆಯೋಜಿಸಿತ್ತು. ಆರೋಹಣವು ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಪ್ರದರ್ಶಿಸಲು ಒದಗಿಸಲಾದ ಒಂದು ಉತ್ತಮ ವೇದಿಕೆಯಾಗಿದೆ.

ಸುಮಾರು 2500 ವಿದ್ಯಾರ್ಥಿಗಳು 8 ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಅವುಗಳೆಂದರೆ ಭಗವದ್ಗೀತೆ, ವಿಜ್ಞಾನ ಪ್ರಯೋಗಗಳು, ದೇಶಭಕ್ತಿ ಗೀತೆ, ಆಶುಭಾಷಣ, ಅಣಕು ಕಲೆ, ನಾಟಕ, ಜೇಡಿ ಮಣ್ಣಿನ ಮಾದರಿಗಳು ಮತ್ತು ಏಕಪಾತ್ರಾಭಿನಯ.

ಈ ಕಾರ್ಯಕ್ರಮದಲ್ಲಿ ಸುಮಾರು 700 ಸ್ವಯಂಸೇವಕರು ಸಮಯವನ್ನು ನೀಡಿ ಸಕ್ರಿಯವಾಗಿ ಭಾಗವಹಿಸಿದರು. ನೂರಕ್ಕಿಂತ ಹೆಚ್ಚು ಸ್ವಯಂಸೇವಕರು ಹಿಂದಿನ ದಿನದಿಂದಲೇ ಸೆಲ್ಫಿ ಬೂತ್ ವ್ಯವಸ್ಥೆ, ವೇದಿಕೆ ಅಲಂಕಾರ, ವಿಜ್ಞಾನ ಪ್ರಯೋಗಗಳಿಗೆ ಟೇಬಲ್ ಗಳನ್ನು ಜೋಡಿಸುವ ಮತ್ತು ಇತರ ಕಾರ್ಯಗಳಲ್ಲಿ ನಿರತರಾಗಿದ್ದರು.

ನಗರ ಮತ್ತು ಗ್ರಾಮೀಣ ಪ್ರದೇಶದ ವಿವಿಧ ಭಾಗಗಳ ವಿದ್ಯಾರ್ಥಿಗಳು ಮತ್ತು ಸ್ವಯಂಸೇವಕರು ಬೆಂಗಳೂರು, ತುಮಕೂರು, ರಾಮನಗರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಬರುವುದಕ್ಕಾಗಿ ಸುಮಾರು 75 ಬಸ್ ಗಳನ್ನು ವ್ಯವಸ್ಥೆಗೊಳಿಸಲಾಗಿತ್ತು.  ವಿದ್ಯಾರ್ಥಿಗಳು ಕಲಿಕಾಕೇಂದ್ರಗಳಿಂದ, ನೆಲೆ ಕೇಂದ್ರಗಳಿಂದ, ಅಮೃತ ಶಿಶು ನಿವಾಸ, ಸರ್ಕಾರಿ ವಸತಿ ನಿಲಯ ಮತ್ತು ಸರ್ಕಾರಿ ಶಾಲೆಗಳಿಂದ ಬಂದಿದ್ದರು.

ಕಾರ್ಯಕರ್ತರ ಉತ್ತಮವಾದ ನಿರ್ವಹಣೆ ಮತ್ತು ಪರಿಶ್ರಮದಿಂದ ಸುಮಾರು 200+ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಹಾಗೂ 3200 ವಿದ್ಯಾರ್ಥಿಗಳು/ಸ್ವಯಂಸೇವಕರ ನೋಂದಣಿ ಸರಾಗವಾಗಿ ನಡೆಯಿತು.

ಆರೋಹಣ ಕಾರ್ಯಕ್ರಮವು ಅಭ್ಯುದಯದ ವಿದ್ಯಾರ್ಥಿಗಳು ವೇದ ಮಂತ್ರಗಳನ್ನು ಪಠಿಸುವ ಮೂಲಕ ಆರಂಭವಾಯಿತು. ಕಾರ್ಯಕ್ರಮದಲ್ಲಿ ಶ್ರೀ. ಕೆ. ಸಿ. ರಾಮಮೂರ್ತಿ – ಚೇರ್ಮನ್ ಆಫ್ ಸಿಎಂಆರ್ ಜನಾರ್ಧನ ಟ್ರಸ್ಟ್, ಶ್ರೀ ಗೋಪಿನಾಥ್.ಕೆ – ಇಂಟರ್ನ್ಯಾಷನಲ್ ಪ್ಯಾರಾ ಕ್ರೀಡಾಪಟು. ಶ್ರೀ ಗಣಪತಿ ಹೆಗ್ಡೆ – ಕೆಕೆಎಸ್ಎಸ್ ನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು. ವೇದಿಕೆ ಮೇಲಿದ್ದ ಗಣ್ಯರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಶೈಕ್ಷಣಿಕ ಕ್ಷೇತ್ರದಲ್ಲಿನ ಸವಾಲುಗಳನ್ನು ಹೇಗೆ ನಿರ್ವಹಿಸಬೇಕೆಂದು ಮತ್ತು ಜೀವನದಲ್ಲಿ ಹೇಗೆ ಯಶಸ್ಸನ್ನು ಕಾಣಬೇಕು ಎಂದು ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು.

ವಿಜ್ಞಾನದ ಪ್ರಯೋಗಗಳು ಹಾಗೂ ಜೇಡಿ ಮಣ್ಣಿನ ಮಾದರಿಗಳು ಕಾರ್ಯಕ್ರಮದ ಬಹು ಮುಖ್ಯ ಆಕರ್ಷಣೆಯಾಗಿತ್ತು. ಅವುಗಳಲ್ಲಿ ಆಮ್ಲ ಮಳೆ, ಜ್ವಾಲಾಮುಖಿ ಸ್ಫೋಟ, ನೀರಿನ ಸಂರಕ್ಷಣೆ, ಸೌರ ಶಕ್ತಿ, ಆಮ್ಲ ಮತ್ತು ಪ್ರತ್ಯಾಮ್ಲಗಳು ಮತ್ತು ಪರಿಸರ ಸಂರಕ್ಷಣೆಯ ಕುರಿತಾಗಿದ್ದ ಹಲವು ಪ್ರಯೋಗಗಳು ಎಲ್ಲರ ಗಮನ ಸೆಳೆದವು. ಆದಿಯೋಗಿಯ ಪ್ರತಿಮೆ, ಹಳ್ಳಿಯ ಜೀವನ, ರಾಮ ಮಂದಿರ, ಪಕ್ಷಿಗಳು ಮತ್ತು ಪ್ರಾಣಿಗಳು, ಚಂದ್ರಯಾನ ಇನ್ನೂ ಹಲವು ಬಗೆಯ ಮಣ್ಣಿನ ಕಲಾಕೃತಿಗಳು ಮಕ್ಕಳ ಕ್ರಿಯಾಶೀಲತೆಯನ್ನು ಬಿಂಬಿಸಿತು.

ಸಂಚಾರ ನಿಯಮಗಳು ಮತ್ತು ಸೈಬರ್ ಅಪರಾಧ ತಡೆಗಟ್ಟುವ ಕುರಿತು ಮಕ್ಕಳು ಮಾಡಿದ ನಾಟಕಗಳು ಅವರ ಪ್ರತಿಭೆಗಳನ್ನು ಪ್ರದರ್ಶಿಸಿತು.
ಅನೇಕ ಸ್ಪರ್ಧೆಗಳ ನಡುವೆ ವಿದ್ಯಾರ್ಥಿಗಳಿಗಾಗಿ ಒರಾಕಲ್ ಸ್ವಯಂ ಸೇವಕರು ಹಲವು ಚಿಕ್ಕ ಚಿಕ್ಕ ಆಟಗಳನ್ನು ಹಾಗೂ ವಿವಿಧ ಸ್ಥಳಗಳಲ್ಲಿ ಮಕ್ಕಳ ಗುಂಪಿನ ನಡುವೆ ರಸಪ್ರಶ್ನೆಗಳನ್ನು ಏರ್ಪಡಿಸಲಾಗಿತ್ತು.

ಮುನ್ನೆಚ್ಚರಿಕೆ ಕ್ರಮವಾಗಿ ವೈದ್ಯರ ತಂಡ, ಆಂಬುಲೆನ್ಸ್ ಮತ್ತು ಪ್ರಥಮ ಚಿಕಿತ್ಸೆ ಕೊಡುವ ವ್ಯವಸ್ಥೆಯನ್ನು ಮಾಡಲಾಗಿತ್ತು.

ಎಲ್ಲಾ ಸ್ಪರ್ಧೆಗಳಿಗಾಗಿ ಸುಮಾರು 200 ತೀರ್ಪುಗಾರರು ಸಮಯವನ್ನು ನೀಡಿದರು. ಸುಮಾರು 220 ಬಹುಮಾನಗಳನ್ನು ಮತ್ತು ಪ್ರಮಾಣಪತ್ರಗಳನ್ನು ಎಲ್ಲಾ ವಿಜೇತ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಕಾರ್ಯಕ್ರಮದ ಅಂತಿಮ ಭಾಗದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಹಾಗೂ ಸ್ವಯಂಸೇವಕರಿಗೆ ಲೇಖನ ಸಾಮಗ್ರಿಗಳನ್ನೊಳಗೊಂಡ ನೆನಪಿನ ಕಾಣಿಕೆ ಮತ್ತು ಅಭ್ಯುದಯ 2024 ಕ್ಯಾಲೆಂಡರ್ ಗಳನ್ನು ನೀಡಲಾಯಿತು.

ಆರೋಹಣಕ್ಕೆ ಆಗಮಿಸಿದಂತಹ ಸರ್ವರಿಗೂ ರುಚಿಕರವಾದ ಉಪಹಾರ ಮತ್ತು ಮಧ್ಯಾಹ್ನದ ಊಟವನ್ನು ನೀಡಲಾಯಿತು. ಎಲ್ಲಾ ವ್ಯವಸ್ಥೆಗಳಲ್ಲಿ ಪರಿಸರ ಸ್ನೇಹಿಯಾದ ವಸ್ತುಗಳನ್ನು ಮಾತ್ರ ಬಳಕೆ ಮಾಡಲಾಗಿತ್ತು.

ಬಹುಮಾನ ವಿತರಣೆಯ ಸಂದರ್ಭದಲ್ಲಿ ಶ್ರೀ ಕೃಷ್ಣ ಸಂಧಾನವನ್ನು ಅತ್ಯುತಮವಾಗಿ ವಿದ್ಯಾರ್ಥಿಗಳು ಪ್ರದರ್ಶಿಸಿದರು.

ಈ ಬೃಹತ್ ಆರೋಹಣದ ಕಾರ್ಯಕ್ರಮಕ್ಕಾಗಿ ಸಹಾಯ-ಸಹಕಾರ ನೀಡಿದ ಎಲ್ಲಾ ದಾನಿಗಳನ್ನು, ಸಂಸ್ಥೆಗಳನ್ನು ನೆನಪಿಸಿಕೊಂಡು ಧನ್ಯವಾದಗಳನ್ನು ಅರ್ಪಿಸಲಾಯಿತು.

ಆರೋಹಣವು ಯಶಸ್ವಿಯಾಗಿ ಮುಗಿದ ನಂತರ ಎಲ್ಲಾ ಸ್ವಯಂಸೇವಕರು ಆವರಣವನ್ನು ಸ್ವಚ್ಛಗೊಳಿಸಿ ಹಿಂದಿರುಗಿದರು. ಅಭ್ಯುದಯದ ಸ್ವಯಂಸೇವಕರು ಹಾಗೂ ವಿದ್ಯಾರ್ಥಿಗಳು ಆರೋಹಣವನ್ನು ಬಹಳ ಖುಷಿಯಿಂದ ಆನಂದಿಸಿದರು.

ಅಭ್ಯುದಯ ಆರೋಹಣ ಸ್ಪರ್ಧೆಗಳು : 31-12-2023